ಕರ್ಪುರ ಶ್ರೀನಿವಾಸರಾವ್ ೧೮೬೩-೧೯೩೨. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ಪ್ರವೃತ್ತಿಯಲ್ಲಿ ಸಾಹಿತ್ಯ ಪ್ರೇಮಿಗಳಾಗಿ ಕನ್ನಡ ನುಡಿಯ ಅಭಿವೃದ್ಧಿಗಾಗಿ ಶ್ರಮಿಸಿದವರು. ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ಮಾಣಕಾರ್ಯದಲ್ಲಿ ಇವರು ವಹಿಸಿದ ಆಸಕ್ತಿ ಸ್ಮರಣೀಯ. ಜನನ ೧೮೬೩. ಇವರ ತಂದೆ ಕರ್ಪೂರ ಸುಬ್ಬರಾವ್. ಇವರ ಪೂರ್ವಿಕರು ತಿರುಪತಿಯ ತಿಮ್ಮಪ್ಪನ ದರ್ಶನಕ್ಕೆ ಮೊದಲು ಹೋದಾಗ, ಬೆಟ್ಟದ ಅಡಿಯಿಂದ ಮುಡಿಯವರೆಗೂ ಉಂಡುಂಡೆ ಕರ್ಪೂರವನ್ನು ಉರಿಸಿದ್ದರಿಂದ ಇವರ ವಂಶಕ್ಕೆ ಕರ್ಪೂರ ಎಂಬ ಹೆಸರು ಬಂತಂತೆ. ಇವರದು ಶ್ರೀಮಂತ ಮನೆತನವಾಗಿದ್ದರೂ ಇವರ ತಂದೆಯವರ ಕಾಲಕ್ಕೆ ಬಹಳ ಬಡತನದಲ್ಲಿಯೇ ಇವರ ವ್ಯಾಸಂಗ ನಡೆಯಿತು. ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ, ಇಂಟರ್ ಪರೀಕ್ಷೆಯಲ್ಲಿ ತೇರ್ಗಡೆಯಾಗುವಷ್ಟರಲ್ಲಿ ಇವರ ತಂದೆಯವರು ತೀರಿಕೊಂಡರು. ಹೀಗಾಗಿ ಇವರು ಮುಂದಿನ ವ್ಯಾಸಂಗದ ಆಸೆಯನ್ನು ಬಿಟ್ಟು, ಪುಣೆಗೆ ಹೋಗಿ ಉದ್ಯೋಗಕ್ಕಾಗಿ ಪ್ರಯತ್ನಿಸಿದರು. ಈ ಸಮಯದಲ್ಲಿ ವಕೀಲರೊಬ್ಬರ ಪರಿಚಯ ವಾಯಿತು. ಆ ವಕೀಲರು ಇವರ ಪ್ರತಿಭೆಯನ್ನು ಗುರುತಿಸಿ, ಇವರ ಮುಂದಿನ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟರು. ಪ್ರೋತ್ಸಾಹಗೊಂಡ ಶ್ರೀನಿವಾಸರಾಯರು ಪುಣೆಯಲ್ಲಿದ್ದು ಕೊಂಡು ಬಿ.ಎಸ್ಸಿ., ಎಲ್.ಸಿ.ಇ. ಪದವಿಗಳನ್ನು ಗಳಿಸಿದರು. ಮುಂಬಯಿ ಪ್ರಾಂತ್ಯದ ಮರಾಮತ್ ಇಲಾಖೆಯಲ್ಲಿ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದ ಇವರು, ಆ ಇಲಾಖೆಯಲ್ಲಿ ೨೫ ವರ್ಷಗಳ ಕಾಲ ಸೇವೆ ಸಲ್ಲಿಸಿ, ಮುಖ್ಯ ಎಂಜಿನಿಯರ್ ಪದವಿಗೇರಿ ನಿವೃತ್ತರಾದರು. ಇವರ ವೈಜ್ಞಾನಿಕ ಪ್ರತಿಭೆ ಕಾರ್ಯದಕ್ಷತೆಗಳನ್ನು ಗುರುತಿಸಿದ ಆಗಿನ ಮೈಸೂರು ಸರ್ಕಾರ ಇವರನ್ನು ಪ್ರಧಾನ ಎಂಜಿನಿಯರ್ ಹುದ್ದೆಗೆ ನೇಮಿಸಿಕೊಂಡಿತು. 
ಕರ್ಪೂರ ಶ್ರೀನಿವಾಸರಾಯರು ಧಾರ್ಮಿಕ ಸಂಪ್ರದಾಯಶೀಲರಾಗಿದ್ದರು. ಕನ್ನಡದ ಜೊತೆಗೆ ಸಂಸ್ಕೃತ, ಇಂಗ್ಲಿಷ್ ಮತ್ತು ಮರಾಠಿ ಭಾಷೆಗಳನ್ನು ಕಲಿತಿದ್ದರು. ಅನೇಕ ಸಾರ್ವಜನಿಕ ಸಂಘ ಸಂಸ್ಥೆಗಳೊಂದಿಗೆ ಸಂಪರ್ಕವನ್ನು ಹೊಂದಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ ಸು.೧೩ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಹಲವಾರು ಕನ್ನಡ ಸಂಘ ಸಂಸ್ಥೆಗಳಿಗೆ ಮತ್ತು ಕನ್ನಡ ಲೇಖಕರಿಗೆ ಇವರು ಆರ್ಥಿಕ ನೆರವನ್ನು ನೀಡಿದ್ದರು.

ಗಾಂಧೀಜಿ ಅವರ ಸ್ವಾತಂತ್ರ್ಯ ಚಳವಳಿಯಿಂದ ಪ್ರಭಾವಿತರಾಗಿದ್ದ ಶ್ರೀನಿವಾಸರಾಯರು ಖಾದಿ ಭಕ್ತರಾಗಿದ್ದರು. ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರತ್ಯಕ್ಷವಾಗಿ ಭಾಗವಹಿಸದಿದ್ದರೂ ಪರೋಕ್ಷವಾಗಿ ಬೆಂಬಲ ಕೊಟ್ಟಿದ್ದರು. ಇವರ ಸಾರ್ವಜನಿಕ ಸೇವೆಯನ್ನು ಗಮನಿಸಿ ಆಗಿನ ಮೈಸೂರು ಮಹಾರಾಜರು ರಾಜಸಭಾಭೂಷಣ ಎಂಬ ಬಿರುದನ್ನು ಕೊಟ್ಟು ಗೌರವಿಸಿದ್ದರು. ಹಾಸನದಲ್ಲಿ ೧೯೧೯ರಲ್ಲಿ ನಡೆದ ೫ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇವರನ್ನು ಅಧ್ಯಕ್ಷರನ್ನಾಗಿ ಮಾಡಿ ಗೌರವಿಸಲಾಯಿತು. ಬೇರೆ ಬೇರೆ ಭಾಷೆಗಳ ಅಭ್ಯಾಸದಿಂದ ಕನ್ನಡವನ್ನು ಶ್ರೀಮಂತಗೊಳಿಸಬೇಕು; ಕನ್ನಡದಲ್ಲಿ ಉತ್ತಮ ಗ್ರಂಥಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟವಾಗಬೇಕು- ಎಂಬುದು ಇವರ ಹೆಬ್ಬಯಕೆಯಾಗಿತ್ತು.

ಇವರು ನಿಧನರಾದ (೨ ಜೂನ್ ೧೯೩೨) ತರುವಾಯ ಕಾವ್ಯ ಸಂಬಂಧವಾದ ಶಾಸ್ತ್ರೀಯ ವಿಚಾರಗಳನ್ನು ಕುರಿತು ಇವರು ಬರೆದಿದ್ದ ಲೇಖನಗಳನ್ನು ಸಂಪಾದಿಸಿ ಸಾಹಿತ್ಯ ಶಾಸ್ತ್ರ (೧೯೭೧) ಎಂಬ ಹೆಸರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪುಸ್ತಕರೂಪದಲ್ಲಿ ಪ್ರಕಟಿಸಿದೆ. 	*
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ